About

ದಲಿತ ವಿದ್ಯಾರ್ಥಿ ಪರಿಷತ್‌ – DVP

The Dalit Vidyarthi Parishad (DVP) is an organization that works under the principles of Baba Saheb Ambedkar and advocates the rights of exploited students under the Constitution. Baba Saheb is working to educate the students on the development of the exploited classes and to inform the students of Baba Saheb Dr BR Ambedkar.

ದಲಿತ ವಿದ್ಯಾರ್ಥಿ ಪರಿಷತ್ ಕುರಿತು

ನಮ್ಮ ಮಹಾತ್ಮರು ಕನಸಿದ್ದೇನು ? ಈಗ ನಾವು ಕಾಣುತ್ತಿರುವುದೇನು ?

ಬಂಧುಗಳೆ…

ನಮ್ಮ ಈ ದೇಹ ಮತ್ತು ದೇಶ ಎರಡೂ ನಮ್ಮ ಹಿರಿಕರರು ಕಟ್ಟಿ , ಕೊಟ್ಟಿರುವ ಬೆವರು ಮತ್ತು ನೆತ್ತರ ಬಳವಳಿ, ತಮ್ಮ ಹಾಡಿ, ಕಾಡು,ಕೂಸುಗಳನ್ನು ಕಾಪಾಡಿಕೊಳ್ಳಲು ಮೂಲನಿವಾಸಿ ಬಹುಜನರಾದ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮೈನಾರಟಿ ಸಮುದಾಯಗಳು ಮಾಡಿದ ಕದನಗಳು, ಬಲಿದಾನಗಳು ಒಂದೆರಡಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಸಹಸ್ರಾರು ವರ್ಷಗಳಿಂದ ನಡೆಯುತ್ತಿದ್ದ ಅಮಾನವೀಯತೆಯನ್ನು ಅಂತ್ಯಗಳಿಸಲು ಸಂತರು ಉಣಬಡಿಸಿದ ಚಿಂತನಾ ಜೀವಾಮೃತ ಮತ್ತು ಅದಕ್ಕಾಗಿ ಅವರು ಅನುಭವಿಸಬೇಕಾಗಿ ಬಂದ ಯಾತನೆಗಳನ್ನು ಕಣ್ಣೀರಿಂದಲೂ ಬರೆಯಲು ಸಾಧ್ಯವಿಲ್ಲ. ಸಮಾನ – ಸಮೃದ್ಧ – ಸ್ವಾಭಿಮಾನಿ ಭಾರತವನ್ನು ಕಟ್ಟಲು ನಮ್ಮ ಪೂರ್ವಿಕರು ಕನಿಸಿದ್ದು, ಕನಲಿದ್ದು, ಕಡುಕಷ್ಟಗಳನ್ನು ಅನುಭವಿಸಿದ್ದು ಎಂತಹ ವಿವರಣೆಗಳಿಗೂ ನಿಲುಕುವಂಥದ್ದಲ್ಲ. ಸತ್ಯಕ್ಕಾಗಿ, ಸಕಲರ ಹಿತಕ್ಕಾಗಿ ಅವಿರತವಾಗಿ ನಡೆದ ಈ ಸಂಘರ್ಷಯಾನ ಹಾಗೂ ಹುತಾತ್ಮರ ಬಲಿದಾನಗಳಿಂದಾಗಿಯೇ ಹೊಸ ಭಾರತ ಹುಟ್ಟಲು ಸಾಧ್ಯವಾಯಿತು. ಗತ ಭಾರತದ ಕನಸುಗಳು ಹೊಸ ಭಾರತದ ಸಂವಿಧಾನದಲ್ಲಿ ಬಾಬಾಸಾಹೇಬ್ ಅವರಿಂದ ಅಡಿಗಲ್ಲುಗಳಾಗಿ ನೆಡಲ್ಪಟ್ಟವು. ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಮತ್ತು ಸಮಾಜಿಕ ನ್ಯಾಯಗಳು ನಮ್ಮ ದೇಶದ ದಿಗ್ದರ್ಶನಾ ಧೈಯಗಳಾದವು. ಸಂವಿಧಾನ ಇಲ್ಲದವರ ಹಿತಬಯಸಿ ಅವರಿಗಾಗಿ ಹಕ್ಕುಗಳನ್ನು ನಿಡಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದವರು ಮಾತ್ರ ಉಳ್ಳವರೇ ಆದರು. ಹಾಗಾಗಿ ಉಳ್ಳವರ “ಪ್ರಜಾತಂತ್ರ ನೆಲೆಯೂರಿತೇ ಹೊರತು ಇಲ್ಲದವರ ಜನತಂತ್ರ” ಸ್ಥಾಪನೆಗೊಳ್ಳಲಿಲ್ಲ . ಬಯಸಿದ ಹಕ್ಕುಗಳಿಗಾಗಿ ಹೋರಾಡುವುದು ಜನರಿಗೆ ತಪ್ಪಲಿಲ್ಲ. ಭೂಮಿಗಾಗಿ, ದುಡಿಮೆಯ ಹಕ್ಕಿಗಾಗಿ, ದಮನಿತರ ಸ್ವಾಭಿಮಾನಕ್ಕಾಗಿ, ಬದುಕುವ ಹಕ್ಕಿಗಾಗಿ, ಹೆಣ್ಣಿನ ಸ್ವಾತಂತ್ರ್ಯ ಹಾಗೂ ರಕ್ಷಣೆಗಾಗಿ, ರಾಜಕೀಯ ಅಧಿಕಾರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಸಾಲು – ಸಾಲು ಹೋರಾಟಗಳು ನಡೆದವು. ಪಾರಂಪರಿಕವಾಗಿ ನಮ್ಮ ಮೇಲೆ ಸಾಮಾಜಿಕ ಮೇಲಾಧಿಪತ್ಯ ನಡೆಸಿದ್ದ ಮನುವಾದಿ ಶಕ್ತಿಗಳಿಗೆ ಮತ್ತು ಬ್ರಿಟೀಷರ ಅಕ್ರಮ ಸಂತಾನಗಳಾಗಿ ಹುಟ್ಟಿ ಬಂಡವಾಳದ ಬೂಟು ತೊಟ್ಟು ದೈತ್ಯಾಕಾರವಾಗಿ ಬೆಳೆದಿರುವ ಕಾರ್ಪೋರೇಟ್ ಬಾಸುಗಳಿಗೆ ನಮ್ಮ ಈ ಅರೆಬರೆ ಉನ್ನತಿ ಮತ್ತು ನಾವು ಅನುಭವಿಸುತ್ತಿದ್ದ ಈ ಅರೆಬರೆ ಸ್ವಾತಂತ್ರವೂ ಸಹ್ಯವಾಗಲಿಲ್ಲ. ನಮ್ಮನ್ನು ಮತ್ತೆ ದಾಸರನ್ನಾಗಿಸಲು ಮತ್ತು ಉಚಿತ ಬಿಟ್ಟಿ ಕೂಲಿಗಳನ್ನಾಗಿಸಲು ಎಡಬಿಡದೆ ಷಡ್ಯಂತ್ರಗಳನ್ನು ಹೆಣೆಯತೊಡಗಿದರು. ಫ್ಯಾಸೀವಾದವೆಂದರೆ ಆಳುವವರು ನಡೆಸುವ ಸರ್ವಾಧಿಕಾರ ಮಾತ್ರವಲ್ಲ. ಜನಸಾಮಾನ್ಯರನ್ನು ಮೋಡಿಗೊಳಿಸಿ ಅವರ ಸಮ್ಮತಿಯೊಂದಿಗೆ ಜಾರಿಗೆ ತರುವ ನಿರಂಕುಶಧಿಕಾರ, ಒಂದು ಜನ ಸಮುದಾಯ ಮತ್ತೊಂದು ಜನ ಸಮುದಾಯವನ್ನು ದ್ವೇಷಿಸುವಂತೆ ಮಾಡುವ, ಶೋಷಕರೇ ತಮ್ಮ ಉದ್ಧಾರಕರು ಎಂದು ಭಾವಿಸುವಂತೆ ಮಾಡುವ, ವಿವೇಚನಾ ಶಕ್ತಿಯನ್ನೆ ನಾಶಗೊಳಿಸಿ ಜನರನ್ನು ಅಂಧ ರಾಜಕೀಯ ಭಕ್ತರನ್ನಾಗಿಸುವ ಸಾಮಾಜಿಕ ಕುತಂತ್ರ, ಅಧಾರ್ಮಿಕ ಬಲ, ಸಾಮಾಜಿಕ ಬಲ, ಹಣದ ಬಲ ಮತ್ತು ಮಾಧ್ಯಮದ ಬಲ ಬಳಸಿಕೊಂಡು ಈ ಕುತಂತ್ರವನ್ನು ಕಾರ್ಯರೂಪಕ್ಕೆ ಇಳಿಸಿದರು. ನಮ್ಮ ಜನರ ಮುಗ್ನ ಭಾವನೆಗಳನ್ನು ಬಳಸಿಕೊಂಡರು, ನಮ್ಮವರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡರು. ದೇವರ ಹೆಸರಲ್ಲಿ ಧರ್ಮದ ಹೆಸರಲ್ಲಿ ರಾಷ್ಟ್ರದ ಹೆಸರಲ್ಲಿ ನಮಗೆ ದ್ವೇಷದ ವಿಷವನ್ನು ಕುಡಿಸಿದರು. ನೆರೆಯವರನ್ನೇ ಅನುಮಾನಿಸುವಂತೆ ಮಾಡಿದರು, ಮನೆಮುರಿಯಲು ಬಂದವರನ್ನು ಆಪತ್ಕಾಂದವರೆಂದು ಕಾಣುವಂತೆ ಮಾಡಿದರು. ಪಾರಂಪರಿಕ ನಾಲಿಗೆ ಮತ್ತು ಆಧುನಿಕ ಮಾಧ್ಯಮ ಎರಡನ್ನೂ ಇದಕ್ಕಾಗಿ ಬಳಸಿಕೊಂಡರು. ನಾವು ಬಡಿದಾಡಿಕೊಳ್ಳಲು ಶುರುಮಾಡಿದೆವು. ಅವರು ಬಾಚಿಕೊಳ್ಳಲು ಪ್ರಾರಂಭಿಸಿದರು. ನೋಡನೋಡುತ್ತಿದ್ದಂತೆ ಧಾರ್ಮಿಕ ಕೇಂದ್ರಗಳು, ಶಾಲಾ ಕಾಲೇಜುಗಳು, ಓಣಿಗಳು, ಒಂದೊಂದೇ ಸಮುದಾಯಗಳು, ರಾಜಕೀಯ ಅಧಿಕಾರ, ಮಾಧ್ಯಮ, ಮಿಲಿಟರಿ ಕೊನೆಗೆ ನ್ಯಾಯಾಲಯ ಎಲ್ಲವೂ ಅವರ ಕಪಿಮುಷ್ಟಿಗೆ ಒಳಗಾಗಿಬಿಟ್ಟವು. ಉಳ್ಳವರ “ಪ್ರಜಾತಂತ್ರದ ಜಾಗದಲ್ಲಿ ದುಷ್ಟರ ಸರ್ವಾಧಿಕಾರ” ಸಂಸ್ಥಾಪಿಸಲ್ಪಟ್ಟಿತು. ನಮ್ಮ ಸಂತರು, ಹಿರಿಯರು, ಹುತಾತ್ಮರು ಕಟ್ಟಿದ ದೇಶ ಜಾತಿವಾದಿಗಳ, ಧರ್ಮಾಂಧರ, ದುರಭಿಮಾನಗಳ ಹಾಗೂ ಕ್ರಿಮಿನಲ್ ಜಾತಿವಾದಿಗಳ ಪಾಲಾಗಿಬಿಟ್ಟಿತು. ಸರ್ವಾಧಿಕಾರಿಗಳು ನಮ್ಮ ಸರ್ವವನ್ನೂ ಕಬಳಿಸಲು ಹೊರಟಿದ್ದಾರೆ ನಮ್ಮನ್ನು ದನಿ ಇಲ್ಲದ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಈಗ ನೇರ ಪ್ರಶ್ನೆ ನಮ್ಮ ಮುಂದೆ, ದುಷ್ಟರಿಗೆ ಶರಣಾಗಿ ನಮ್ಮ ಮಹಾತ್ಮರ ಕನಸು ಮಣ್ಣುಗೂಡಲು ಬಿಡೋಣವೆ ? ಅಥವಾ ಅವರ ಚಿತೆಯ ಚೈತನ್ಯಗಳಾಗಿ ಮೇಲೆದ್ದು ನಮ್ಮ ಪಾಲನ್ನು ಪಡೆದು ಈ ನೆಲದ ಮಕ್ಕಳಿಗಾಗಿ ಮರು ದಕ್ಕಿಸಿಕೊಳ್ಳೋಣವೆ ?

ದಲಿತ ವಿದ್ಯಾರ್ಥಿ ಪರಿಷತ್ತಿನ ಉದ್ದೇಶಗಳೇನು ? : ಸಮಾಜದಲ್ಲಿ ಬೇರುಬಿಟ್ಟಿರುವ ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಜಾತಿ, ಧರ್ಮ, ಲಿಂಗ ಮತ್ತು ಪ್ರಾಂತೀಯ ಅಸಮಾನತೆಗಳ ವಿರುದ್ಧ ಹಾಗೂ ಶೋಷಿತ ವರ್ಗಗಳ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಲಿತ ವಿದ್ಯಾರ್ಥಿ ಪರಿಷತ್ತು ಸಂಘರ್ಷ ನಡೆಸುತ್ತದೆ. ಎಲ್ಲ ರೀತಿಯ ಅಸಮಾನತೆಗಳು ಅಂತ್ಯಗೊಳ್ಳಬೇಕು. ನೆಮ್ಮದಿಯ ಸುಸ್ಥಿರ ಬದುಕು ಈ ಶೊಷಿತ, ಧಮನಿತ ಸಮುದಾಯಗಳಿಗೂ ಸಿಗಬೇಕು, ಸಂವಿಧಾನ ಆಶಯದಂತೆ ಎಲ್ಲ ಹಕ್ಕು ಅಧಿಕಾರ ದಲಿತ ಧಮನಿತರಿಗೂ ದೊರೆಯಬೇಕು.

ಸಮಸಮಾಜದ ಸ್ಥಾಪನೆ ದಲಿತ ವಿದ್ಯಾರ್ಥಿ ಪರಿಷತ್ತಿನ ಅಂತಿಮ ಗುರಿಯಾಗಿದೆ : ಸಮಸಮಾಜದ ಸ್ಥಾಪನೆ ಅಷ್ಟು ಸುಲಭವಲ್ಲ ಅದೊಂದು ಸುದೀರ್ಘ ಸಂಘರ್ಷದ ಪಯಣ ಎಂಬ ಅರಿವು ವಿದ್ಯಾರ್ಥಿ ಪರಿಷತ್ತಿಗೆ ಇದೆ. ಅದಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ನಾವು ಮಾಡಬೇಕಿದೆ ಹಾಗೂ ಸಾಧಿಸಬೇಕಿದೆ. ನಮಗೆ ಅಂಬೇಡ್ಕರ್ ಮಾರ್ಗವೇ ಅಂತಿಮ.

ದಲಿತ ವಿದ್ಯಾರ್ಥಿ ಪರಿಷತ್ತು ನಂಬಿಹ ಸಿದ್ಧಾಂತವೇನು ? : ದಲಿತ ವಿದ್ಯಾರ್ಥಿ ಪರಿಷತ್ತು ಅಂಬೇಡ್ಕರವಾದ ಅಂತಿಮ ಮಾರ್ಗ ಎಂದು ಬಲವಾಗಿ ನಂಬಿದೆ. ಜಗತ್ತಿನ ಎಲ್ಲ ವಿದ್ಯಾರ್ಥಿ ಯುವಜನರ ಹಾಗೂ ಈ ನೆಲದಲ್ಲಿ ನಡೆದ ಎಲ್ಲಾ ಸಾಮಾಜಿಕ ಕ್ರಾಂತಿಗಳು DVP ಗೆ ಪ್ರೇರಣೆಗಳಾಗಿವೆ ಮತ್ತು ಸೈದ್ಧಾಂತಿಕ ಸಂಪನ್ಮೂಲಗಳಾಗಿವೆ. ಬ್ರಾಹ್ಮಣ್ಯ ಮತ್ತು ಬಂಡವಾಳವಾದ ಒಟ್ಟುಗೂಡಿ ದೇಶವನ್ನು ಆಪೋಷಣೆ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಬ್ರಾಹ್ಮಣ್ಯದ ಒಳಹೋರಣವನ್ನು ಬಿಚ್ಚಿಟ್ಟು ಅಂಬೇಡ್ಕರವಾದ ನಮ್ಮ ಓದಿಗೆ ವಿಶೇಷ ಒತ್ತು ನೀಡುತ್ತದೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ನಮ್ಮ ಪೂರ್ವಿಕರ ಸೈದ್ಧಾಂತಿಕ ನಿಲುವುಗಳನ್ನೂ ಮರುಹೊಂದಿಸಿಕೊಳ್ಳುತ್ತಾ ಗುರಿ ಸಾಧನೆಯತ್ತ ಸಾಗಬಯಸುತ್ತದೆ.

ಗುರಿ ಸಾಧನೆಯ ಮಾರ್ಗ ಏನೂ ? : ಮೇಲ್ಕಂಡ ಜನಸಿದ್ಧಾಂತಗಳು ಸತ್ಯ ಮತ್ತು ಸಮಾನತೆಯಲ್ಲಿ, ಪ್ರೀತಿ ಮತ್ತು ಪ್ರಾಮಾಣಿಕತೆಯಲ್ಲಿ ಅಚಲ ವಿಶ್ವಾಸವಿಡುವುದನ್ನು ನಮಗೆ ಈ ನೆಲದ ಕ್ರಾಂತಿಗಳು ಕಲಿಸಿವೆ. ಬದಲಾವಣೆ ಜಗದ ನಿಯಮ ಎಂಬುದನ್ನು ಮನವರಿಕೆ ಮಾಡಿಸಿವೆ, ಜನರೇ ಇತಿಹಾಸದ ನಿರ್ಮಾಪಕರು ಎಂಬುದನ್ನೂ ಹೇಳಿಕೊಟ್ಟಿವೆ. ಈ ದೇಶ ಇಂದು ದುಷ್ಟಕೂಟದ ಷಡ್ಯಂತ್ರಕ್ಕೆ ಬಲಿಯಾಗಿದ್ದರೂ ಅದರಿಂದ ಹೊರಬರುವ ಅದಮ್ಯ ಚೈತನ್ಯ ಈ ನೆಲದೊಳಗೆ ಅಂತರ್ಗತವಾಗಿದೆ. ಮೋಡಿಗೊಳಗಾಗಿರುವ ನಮ್ಮ ಜನಕ್ಕೆ ತಮಗಾದ ಮಹಾದ್ರೋಹದ ಅರಿವಾದಾಗ ಜಾಗೃತಿಯ ಹೊಸ ಉಬ್ಬರ ಈ ಶೊಷಿತ ಸಮಾಜಗಳ ಧ್ವನಿಯನ್ನು ಹೊಸ ಎತ್ತರಕ್ಕೆ ಒಯ್ಯಲಿದೆ. ಶೋಷಕರ ಬಲ ಶೋಷಿತರ ಅನೈಕ್ಯತೆಯಲ್ಲಿದೆ. ಜಾಗೃತ ಶೊಷಿತ ವಿದ್ಯಾರ್ಥಿ ಯುವಜನರ ಐಕ್ಯತೆ ಗುರಿ ಸಾಧನೆಯ ಮೂಲಸೂತ್ರವಾಗಿದೆ. ಇದನ್ನು ಸಾಧಿಸಲು ನಾವು ಕೆಳಕಂಡ ಗಟ್ಟಿ ಹೆಜ್ಜೆಗಳನ್ನು ಹಾಕಬೇಕಿದೆ.

ಶೋಷಿತ ವಿದ್ಯಾರ್ಥಿಗಳ ಆಂದೋಲನಕ್ಕೆ ಮುಂದಾಗೋಣ : ವೈಚಾರಿಕ ಪ್ರಬುದ್ಧತೆಯ ವಿದ್ಯಾರ್ಥಿ ಯುವ ಜನತೆಯನ್ನು ಸಂಘಟಿಸುವ ಸ್ಥಳ ವಿಶ್ವಾವಿದ್ಯಾನಿಲಯಗಳಾಗಿವೆ.ವಿದ್ಯಾರ್ಥಿ ಯುವಜನರನ್ನು ಜಾಗೃತಗೊಳಿಸುವ, ಹಕ್ಕಿನ ಅರಿವು ಮೂಡಿಸುವ ಅವರಲ್ಲಿನ ಶಕ್ತಿಯನ್ನು ಅನಾವರಣಗೊಳಿಸುವ ಸಾಧನಗಳಾಗಿವೆ. ವಿವಿಧ ಶೋಷಿತ ವರ್ಗಗಳ, ದಮನಿತ ಸಮುದಾಯಗಳ ವಿದ್ಯಾರ್ಥಿ ಯುವಜನರನ್ನು ಅವರವರ ನ್ಯಾಯಬದ್ಧ ಹಕ್ಕುಗಳಿಗಾಗಿ ಒಗ್ಗೂಡಿಸಿ ವಿದ್ಯಾರ್ಥಿ ಯುವ ಆಂದೋಲನಗಳನ್ನು ಬಲಪಡಿಸೋಣ, ದಮನದ ವಿರುದ್ಧ ಸಿಡಿಯುವ ವಿದ್ಯಾರ್ಥಿ ಯುವಜನ ಹೋರಾಟಗಳನ್ನು ಕಟ್ಟೋಣ, ಪ್ರತ್ಯೇಕ – ಪ್ರತ್ಯೇಕ ಹೋರಾಟಗಳಿಂದಲೇ ಗುರಿಸಾಧನೆ ಸಾಧ್ಯವಿಲ್ಲ ಎಂಬ ಅರಿವನ್ನು ವಿದ್ಯಾರ್ಥಿ ಯುವಜನ ಚಳವಳಿಗಳ ಒಳಗೆ ಬೆಳೆಸೋಣ ನವ ಸಮಾಜ ಕಟ್ಟುವ ನಿನಾದದೊಂದಿಗೆ ಮುನ್ನುಗ್ಗುವ ಸದೃಢ ವಿದ್ಯಾರ್ಥಿ ಪ್ರವಾಹವನ್ನಾಗಿ ಪರಿವರ್ತಿಸೋಣ.

ದಲಿತ ವಿದ್ಯಾರ್ಥಿ ಯುವಜನ ಮಾಧ್ಯಮವನ್ನು ಕಟ್ಟಿಕೊಳ್ಳೋಣ : ಶೊಷಿತ ವಿದ್ಯಾರ್ಥಿಗಳ ಧ್ವನಿ ಜನಸಾಮಾನ್ಯರಿಗೆಲ್ಲರಿಗೂ ತಲುಪಬೇಕಾದರೆ ಮಾಧ್ಯಮವೇ ವಾಹಕ. ಆದರೆ ಮಾಧ್ಯಮ ಮಾರಿಕೊಂಡಿರುವುದು ಮಾತ್ರವಲ್ಲ, ದುಷ್ಟಕೂಟದ ಷಡ್ಯಂತ್ರದ ಭಾಗವಾಗಿಬಿಟ್ಟಿದೆ. ಜನರನ್ನು ಒಡೆಯುವ, ದಿಕ್ಕುತಪ್ಪಿಸುವ, ಸರ್ವಾಧಿಕಾರಿಗಳನ್ನು ಸರ್ವಸಂಭೂತರನ್ನಾಗಿ ಬಿಂಬಿಸುವ, ಶೊಷಿತ ಜನರ ಮನೋಬಲವನ್ನು ಮುರಿಯುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತರ ದಮನಿತರು ತಮ್ಮ ಮಾಧ್ಯಮವನ್ನು ತಾವೇ ಕಟ್ಟಿಕೊಳ್ಳಬೇಕಿದೆ. ಇದು ಸವಾಲಿನ ವಿಚಾರವಾದರೂ ಅಸಾಧ್ಯವಾದುದಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ಶೊಷಿತ ವರ್ಗದ ಯುವಕ ಯುವತಿಯರು ಸಕ್ರಿಯವಾಗಿ ಸತ್ಯದ ಪ್ರತಿಪಾದನೆಗಾಗಿ ಪ್ರಯಾಸ ನಡೆಸಿದ್ದಾರೆ. ಜನಸಂಘಟನೆಗಳು ಜನರನ್ನು ತಲುಪಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆರಂಭಿಸಿವೆ. ಜನಾಂದೋಲನಗಳು ಜೊತೆಗೂಡಿ, ಜನಪರವಾಗಿರುವ ಮಾಧ್ಯಮಗಳ ಒಡಗೂಡಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತರನ್ನು ಆಧರಿಸಿ ದಲಿತ ವಿದ್ಯಾರ್ಥಿ ಯುವಜನ ಮಾಧ್ಯಮವನ್ನು ಬೆಳೆಸಲು ಮುಂದಾಗುವುದಾದರೆ ಕೆಲವೇ ವರ್ಷಗಳಲ್ಲಿ ಜನರಿಂದ ಜನರಿಗೆ ನೇರ ಸಂವಾಹನೆ ಸಾಧ್ಯವಿರುವ ಜನಮಾಧ್ಯಮವನ್ನು ಕಟ್ಟಲು ಸಾಧ್ಯವಿದೆ ಮತ್ತು ನಾವದನ್ನು ಕಟ್ಟಲೇಬೇಕಿದೆ.

ದಲಿತ ವಿದ್ಯಾರ್ಥಿ ಯುವಜನ ಸಾಂಸ್ಕೃತಿಕ ಅಭಿಯಾನ ಆರಂಭಿಸೋಣ : ಸಾಂಸ್ಕೃತಿಕ ಮಾಲಿನ್ಯ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಧರ್ಮದ ಹೆಸರಿನಲ್ಲಿ ದ್ವೇಷಭಾವನೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಮನೋಭಾವವನ್ನು ಸಮಾಜದಲ್ಲಿ ಬಿತ್ತಿಬೆಳೆಸಲಾಗುತ್ತಿದೆ. ಆದರೆ ಸತ್ಯ, ಸಹಜತೆ, ಸರಳತೆ, ಸಹಬಾಳ್ವೆಯ ಮೌಲ್ಯಗಳು ಜನರೊಳಗಿನ್ನು ಸತ್ತಿಲ್ಲ . ನೀರಿಲ್ಲದೆ ಸೊರಗಿರುವ ಈ ಜೀವಕುಡಿಗಳಿಗೆ ನೀರೆರೆದು ಪೋಷಿಸುವ ಅಗತ್ಯವಿದೆ. ಇದಕ್ಕಾಗಿ ನವ ಸಾಂಸ್ಕೃತಿಕಯಾನವನ್ನು ಆರಂಭಿಸಬೇಕಿದೆ. ನಮ್ಮ ಜಾನಪದದ ಬೇರುಗಳನ್ನು, ಸಂತರ ನುಡಿಮುತ್ತುಗಳನ್ನು, ಹುತಾತ್ಮರ ಆಶೋತ್ತರಗಳನ್ನು, ದಾರ್ಶನಿಕರ ಕಣೋಟವನ್ನು ಜನಮಾನಸಕ್ಕಿಳಿಸುವ, ಮರುಉದ್ದೀಪನಗೊಳಿಸುವ ಕೆಲಸ ಮಾಡೋಣ, ಸುಳ್ಳು, ಪೊಳ್ಳು, ದ್ವೇಷದ ಆಧಾರದ ಮೇಲೆ ನಿಂತಿರುವ ಧಾರ್ಮಿಕ ಢಾಂಬಿಕತೆಯನ್ನು ಬಯಲುಗೊಳಿಸಿ ಸತ್ಯ ಮತ್ತು ಪ್ರೀತಿಯ ಆಧ್ಯಾತ್ಮವನ್ನು ಉಣಬಡಿಸೋಣ. ಶೊಷಿತ ಜನಸಮುದಾಯಗಳ ಹೃದಯಂತಾರಳದಲ್ಲಿರುವ ಜೀವಾತ್ಮಕ್ಕೆ ಜೀವ ತುಂಬೋಣ. ಶೊಷಿತ ಜನತಾಳಿಕೆಯ ರಚನೆಗಳನ್ನು ಕಟ್ಟಲು ಶುರುಮಾಡೋಣ. ಆಳುವವರು ಸಂಪೂರ್ಣವಾಗಿ ಶೊಷಿತ ಜನರ ಕೈಬಿಟ್ಟಿವೆ. ಮಾತ್ರವಲ್ಲ ಸುಲಿಗೆಯಲ್ಲಿ ತೊಡಗಿವೆ. ಅಲ್ಲದೆ ಈ ದುಷ್ಟ ಕೂಟವನ್ನು ಮಣಿಸುವ ಹೋರಾಟವೂ ಕೂಡಲೇ ಮುಗಿಯುವಂಥದ್ದಲ್ಲ. ಹಾಗಾಗಿ ಈ ದುಷ್ಟದಿನಗಳನ್ನು ತಾಳಿಕೊಳ್ಳುವ, ತಮ್ಮ ಬದುಕಿನ ಆಧಾರಗಳನ್ನು ತಾವೇ ಕಟ್ಟಿಕೊಳ್ಳುವ, ಒಬ್ಬರಿಗೆ ಮತ್ತೊಬ್ಬರು ಹೆಗಲಾಗುವ ಅಲ್ಲದೆ ಹೊಸ ಸಮಾಜಕ್ಕೆ ಮಾದರಿಯಾಗಬಲ್ಲ ದಲಿತ ವಿದ್ಯಾರ್ಥಿ ಯುವಜನತಾಳಿಕೆಯ ರಚನೆಗಳನ್ನು ಜನಚಳವಳಿಯ ಜೊತೆಜೊತೆಗೇ ಕಟ್ಟಿಕೊಳ್ಳುತ್ತಾ ಸಾಗಬೇಕಿದೆ. ಇದರ ಭಾಗವಾಗಿ ಹಸಿದವರ, ದೌರ್ಜನ್ಯಗಳಿಗೆ ತುತ್ತಾದವರ ದಮನಿತ ಸಮುದಾಯದ ಮಕ್ಕಳನ್ನು ಸಮರ್ಥಗೊಳಿಸುವ ತರಬೇತಿ ತಾಣಗಳನ್ನು ಸಾಮಾಜಿಕ ಕಾರ್ಯತ್ರರನ್ನು ಶಿಕ್ಷಿತರನ್ನಾಗಿಸುವ ವೈಚಾರಿಕ ಕೇಂದ್ರಗಳನ್ನು, ಕಟ್ಟಿಕೊಳ್ಳುವ ಕೆಲಸವನ್ನೂ ಮಾಡುತ್ತಾ ಸಾಗುವ ಅಗತ್ಯವಿದೆ.

ದಲಿತ ವಿದ್ಯಾರ್ಥಿ ಯುವಜನ ರಾಜಕಾರಣಕ್ಕೆ ಅಡಿಪಾಯ ಹಾಕೋಣ : ಪ್ರಸ್ತುತ ರಾಜಕೀಯ ವ್ಯವಸ್ಥೆ ನಾಮ ಮಾತ್ರದ ಪ್ರಜಾತಂತ್ರವಾಗಿದೆ. ಈಗಿರುವ ಮಿಸಲು ಕ್ಷತ್ರಗಳು ಶೋಷಿತ ಸಮೂದಾಯಗಳಿಗೆ ರಾಜಕೀಯ ನ್ಯಾಯವದಗಿಸದೇ ಸಂಪೂರ್ಣ ವಿರುದ್ಧ ದಿಕ್ಕಿಗೆ ಚಲಿಸುತ್ತಿವೆ, ವಾಸ್ತವದಲ್ಲಿ ಇದು ಹಣ, ಜಾತಿ, ಧರ್ಮ, ಲಿಂಗತ್ವ ಮತ್ತು ಮಾಧ್ಯಮದ ಬಲ ಹೊಂದಿರುವ ಜನರ ಪರ ಪಕ್ಷಪಾತಿಯಾಗಿರುವ ವ್ಯವಸ್ಥೆಯಾಗಿದೆ. ಮಿಸಲು ಕ್ಷೇತ್ರಗಳಿಂದ ಆಯ್ಕೆ ಆಗುವ ನಾಯಕರಿಂದಲೆ ಸಂವಿಧಾನ ಅಪಾಯದ ಅಂಚಿಗೆ ತಲುಪಿದೆ. ಶೊಷಿತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ. ರಾಜಕೀಯ ಸಮಾನತೆ ಎಂಬುದಕ್ಕೆ ಯಾವ ಅರ್ಥವೂ ಇಲ್ಲ . ರಾಜಕೀಯ ಇಂದು ಬಲಾಡ್ಯರ ಪರವಾಗಿರುವುದು ಮಾತ್ರವಲ್ಲ ದುಷ್ಟತನದ ಪರಮಾವಧಿಗೆ ತಲುಪಿದೆ. ಈ ಚುನಾವಣೆಗಳಲ್ಲಿ ಸಜ್ಜನರು, ಜನರಪರರು, ದುರ್ಬಲರು ಗೆದ್ದು ಬರುವುದು ಸುಲಭಸಾಧ್ಯವಿಲ್ಲ . ಹಾಗಾಗಿ ಈ ಸಂದರ್ಭ ಹೊಸ ರೀತಿಯ ರಾಜಕೀಯ ಪ್ರಯೋಗವನ್ನು ಕೇಳುತ್ತಿದೆ. ವಿದ್ಯಾರ್ಥಿ ಯುವಜನಾಂದೋಲನಗಳ ಬಲದ ಮೇಲೆ ಜನಸಮುದಾಯಗಳ ಆಶೋತ್ತರವಾಗಿ ಜನಸಾಮಾನ್ಯರ ನಿಗರಾಣಿಯೊಳಗೆ ಮೂಡುವ ಹೊಸ ರೀತಿಯ ರಾಜಕಾರಣಕ್ಕೆ ನಾವು ಹಾದಿ ಸಜ್ಜುಗೊಳಿಸಬೇಕಿದೆ. ಅನಿವಾರ್ಯವಾದ ಆದರೆ ಅಪಾಯಗಳಿಂದ ಕೂಡಿದ ಮಾರ್ಗ ಇದಾಗಿರುವುದರಿಂದ ಕಾಲಿಕ್ಕುವ ಮುನ್ನ ನಮ್ಮ ಅರಿವಿನ ನೆಲೆಯನ್ನು ಬಲಪಡಿಸಿಕೊಳ್ಳಬೇಕಿದೆ ಮತ್ತು ನಡಿಗೆಯ ಹಾದಿಯನ್ನು ನಿಚ್ಚಳಗೊಳಿಸಿಕೊಳ್ಳಬೇಕಿದೆ.

ಜಾಗೃತ ಜನಬಲದ ಆಧಾರದ ಮೇಲೆ ನವ ಪ್ರಬುದ್ಧ ಭಾರತವನ್ನು ಕಟ್ಟೋಣ : ದಲಿತ ಧಮನಿತ ವಿದ್ಯಾರ್ಥಿ ಯುವಜನಾಂದೋಲನ, ದಲಿತ ಧಮನಿತ ವಿದ್ಯಾರ್ಥಿ ಯುವಜನ ಮಾಧ್ಯಮ, ದಲಿತ ಧಮನಿತ ವಿದ್ಯಾರ್ಥಿ ಯುವಜನ ಸಾಂಸ್ಕೃತಿಕ ಅಭಿಯಾನಗಳ ಮೂಲಕ ಜನಜಾಗೃತಿಯನ್ನು ಬೆಳೆಸಬೇಕಿದೆ ಮತ್ತು ಮಹಾಂದೋಲನವನ್ನು ಹುಟ್ಟುಹಾಕಬೇಕಿದೆ. ಸರಳವಾಗಿ ಹೇಳಬೇಕೆಂದರೆ ಮಲಗಿರುವ ಶೊಷಿತ ಸಮಾಜ ಮೇಲೇಳುವಂತೆ ಮಾಡಬೇಕಿದೆ. ಜಾಗೃತ ಸಮಾಜದ ನೇಪಥ್ಯದಲ್ಲಿ ವಿದ್ಯಾರ್ಥಿ ಯುವಜನರಾಜಕಾರಣವನ್ನು ಮುನ್ನೆಲೆಗೆ ತರಬೇಕಿದೆ. ಶೊಷಿತ ಸಮಾಜದ ಸಂಘರ್ಷವನ್ನು ಸಂಸತ್ತಿನಲ್ಲಿ ಒಯ್ಯುವುದು ದಲಿತ ಧಮನಿತ ಯುವಜನ ರಾಜಕಾರಣದ ಉದ್ದೇಶವಾಗಬೇಕಿದೆ. ಯುವಜನಾಂದೋಲನ ಹಾಗೂ ಯುವಜನರಾಜಕಾರಣವನ್ನು ಹದವಾಗಿ ಬೆಸೆಯುವ ಮೂಲಕ ಯುವಜನಾಧಿಕಾರವನ್ನು ಸಮಾಜದಲ್ಲೂ ಸಂಸತ್ತಿನಲ್ಲೂ ಪ್ರತಿಷ್ಟಾಪಿಸಬೇಕಿದೆ. ಈ ಸಂಘರ್ಷ ಸಂಕಟಮಯವಾಗಿರುತ್ತದೆ, ಸಂಕೀರ್ಣವಾಗಿರುತ್ತದೆ. ಸಾವಿರ ಅಡೆತಡೆಗಳನ್ನು ದಾಟಿ ಸಾಗಬೇಕಿರುತ್ತದೆ. ಏಕೆಂದರೆ ದುಷ್ಟ ಶಕ್ತಿಗಳು ಮತ್ತು ಕೋಟಿ ಕೋಟಿಗಳ ಕುಬೇರರು ಅಧಿಕಾರವನ್ನು ಹಾಗೂ ಆಸ್ತಿಯನ್ನು ಅಷ್ಟು ಸುಲಭವಾಗಿ ಜನಸಾಮಾನ್ಯರಿಗೆ ಬಿಟ್ಟುಕೊಡುವುದಿಲ್ಲ. ಆದರೆ ಜಾಗೃತ ವಿದ್ಯಾರ್ಥಿ ಯುವಜನರೆಲ್ಲಾ ಜೊತೆಗೂಡಿ ಬೀದಿಗಿಳಿದರೆ ಆ ಯುವಜನಶಕ್ತಿಯನ್ನು ತಡೆಯುವ ಸಾಮರ್ಥ್ಯ ಯಾವ ಬಲಕ್ಕೂ ಇಲ್ಲ. ಈಗ ಇತಿಹಾಸ ರುಜುವಾತುಪಡಿಸಿರುವ ಕಾಲ.

ದಲಿತ ವಿದ್ಯಾರ್ಥಿ ಪರಿಷತ್ತಿನ ಕಾರ್ಯವಿಧಾನ ಏನು ? : DVP ಒಂದು ವಿಧ್ಯಾರ್ಥಿ ಸಂಘಟನೆಯಾಗಿದೆ. ರಾಜ್ಯಾದ್ಯಂತ ಎಲ್ಲ ವಿಧ್ಯಾರ್ಥಿಗಳನ್ನು ಸಂಘಟಿಸಿ, ವಿಧ್ಯಾರ್ಥಿ ಗಳಲ್ಲಿ ಸಮಾಜಮುಖಿ ಚಿಂತನೆಯ ಅಲೋಚನೆಗಳನ್ನು ಬಿತ್ತುವದು ಮತ್ತು ಅವರ ಹಕ್ಕುಗಳಿಗಾಗಿ ನಿರತರ ಹೋರಾಡುವುದು. ವಿಧ್ಯಾರ್ಥಿಗಳಿಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ನಿರ್ಮಿಸಿ ಅವಕಾಶ ಕಲ್ಪಿಸುವುದು, ದಲಿತ ವಿದ್ಯಾರ್ಥಿ ಪರಿಷತ್ ಯುವಜನರಿಗಾಗಿ ನಿರಂತರ ಕಾರ್ಯಚಟುವಟಿಕೆಗಳಿಂದ ಕುಡಿದೆ ದಲಿತ ವಿದ್ಯಾರ್ಥಿ ಪರಿಷತ್ತು ತನ್ನದೇ ಆದ ಕಾರ್ಯಕರ್ತ ಪಡೆಯ ರಚನೆಯನ್ನೂ ಹೊಂದಿದೆ.

ಜೈ ಭೀಮ್ ಜೈ ಪ್ರಬುದ್ಧ ಭಾರತ

A great man is different from an eminent one in that he is ready to be the servant of the society” -Dr B R Ambedkar

Your first consultation is on us

Back to Top