Home

ದಲಿತ ವಿದ್ಯಾರ್ಥಿ ಪರಿಷತ್‌ – DVP

ದಲಿತ ವಿದ್ಯಾರ್ಥಿ ಪರಿಷತ್ ಶೋಷಿತ ವರ್ಗಗಳ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವ ಮತ್ತು ಹಕ್ಕುಗಳಗಾಗಿ ಹೋರಾಡುವ ಸಂಘಟನೆಯಾಗಿದೆ.

ಬನ್ನಿ ಪರಿಷತ್ ಜೊತೆಗೂಡಿ ಶೋಷಿತ ವರ್ಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸೋಣ.ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ – 2023. ಪರೀಕ್ಷೆ ರಿಸಲ್ಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

ದಲಿತ ವಿದ್ಯಾರ್ಥಿ ಪರಿಷತ್ – DVP ಬಗ್ಗೆ

ನಮ್ಮ ಮಹಾತ್ಮರು ಕನಸಿದ್ದೇನು? ಈಗ ನಾವು ಕಾಣುತ್ತಿರುವುದೇನು?

ನಮ್ಮ ಈ ದೇಹ ಮತ್ತು ದೇಶ ಎರಡೂ ನಮ್ಮ ಹಿರಿಕರರು ಕಟ್ಟಿ , ಕೊಟ್ಟಿರುವ ಬೆವರು ಮತ್ತು ನೆತ್ತರ ಬಳವಳಿ, ತಮ್ಮ ಹಾಡಿ, ಕಾಡು,ಕೂಸುಗಳನ್ನು ಕಾಪಾಡಿಕೊಳ್ಳಲು ಮೂಲನಿವಾಸಿ ಬಹುಜನರಾದ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮೈನಾರಟಿ ಸಮುದಾಯಗಳು ಮಾಡಿದ ಕದನಗಳು, ಬಲಿದಾನಗಳು ಒಂದೆರಡಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಸಹಸ್ರಾರು ವರ್ಷಗಳಿಂದ ನಡೆಯುತ್ತಿದ್ದ ಅಮಾನವೀಯತೆಯನ್ನು ಅಂತ್ಯಗಳಿಸಲು ಸಂತರು ಉಣಬಡಿಸಿದ ಚಿಂತನಾ ಜೀವಾಮೃತ ಮತ್ತು ಅದಕ್ಕಾಗಿ ಅವರು ಅನುಭವಿಸಬೇಕಾಗಿ ಬಂದ ಯಾತನೆಗಳನ್ನು ಕಣ್ಣೀರಿಂದಲೂ ಬರೆಯಲು ಸಾಧ್ಯವಿಲ್ಲ. ಸಮಾನ – ಸಮೃದ್ಧ – ಸ್ವಾಭಿಮಾನಿ ಭಾರತವನ್ನು ಕಟ್ಟಲು ನಮ್ಮ ಪೂರ್ವಿಕರು ಕನಿಸಿದ್ದು, ಕನಲಿದ್ದು, ಕಡುಕಷ್ಟಗಳನ್ನು ಅನುಭವಿಸಿದ್ದು ಎಂತಹ ವಿವರಣೆಗಳಿಗೂ ನಿಲುಕುವಂಥದ್ದಲ್ಲ. ಸತ್ಯಕ್ಕಾಗಿ, ಸಕಲರ ಹಿತಕ್ಕಾಗಿ ಅವಿರತವಾಗಿ ನಡೆದ ಈ ಸಂಘರ್ಷಯಾನ ಹಾಗೂ ಹುತಾತ್ಮರ ಬಲಿದಾನಗಳಿಂದಾಗಿಯೇ ಹೊಸ ಭಾರತ ಹುಟ್ಟಲು ಸಾಧ್ಯವಾಯಿತು. ಗತ ಭಾರತದ ಕನಸುಗಳು ಹೊಸ ಭಾರತದ ಸಂವಿಧಾನದಲ್ಲಿ ಬಾಬಾಸಾಹೇಬ್ ಅವರಿಂದ ಅಡಿಗಲ್ಲುಗಳಾಗಿ ನೆಡಲ್ಪಟ್ಟವು. ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಮತ್ತು ಸಮಾಜಿಕ ನ್ಯಾಯಗಳು ನಮ್ಮ ದೇಶದ ದಿಗ್ದರ್ಶನಾ ಧೈಯಗಳಾದವು. ಸಂವಿಧಾನ ಇಲ್ಲದವರ ಹಿತಬಯಸಿ ಅವರಿಗಾಗಿ ಹಕ್ಕುಗಳನ್ನು ನಿಡಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದವರು ಮಾತ್ರ ಉಳ್ಳವರೇ ಆದರು. ಹಾಗಾಗಿ ಉಳ್ಳವರ “ಪ್ರಜಾತಂತ್ರ ನೆಲೆಯೂರಿತೇ ಹೊರತು ಇಲ್ಲದವರ ಜನತಂತ್ರ” ಸ್ಥಾಪನೆಗೊಳ್ಳಲಿಲ್ಲ . ಬಯಸಿದ ಹಕ್ಕುಗಳಿಗಾಗಿ ಹೋರಾಡುವುದು ಜನರಿಗೆ ತಪ್ಪಲಿಲ್ಲ. ಭೂಮಿಗಾಗಿ, ದುಡಿಮೆಯ ಹಕ್ಕಿಗಾಗಿ, ದಮನಿತರ ಸ್ವಾಭಿಮಾನಕ್ಕಾಗಿ, ಬದುಕುವ ಹಕ್ಕಿಗಾಗಿ, ಹೆಣ್ಣಿನ ಸ್ವಾತಂತ್ರ್ಯ ಹಾಗೂ ರಕ್ಷಣೆಗಾಗಿ, ರಾಜಕೀಯ ಅಧಿಕಾರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಸಾಲು – ಸಾಲು ಹೋರಾಟಗಳು ನಡೆದವು. ಪಾರಂಪರಿಕವಾಗಿ ನಮ್ಮ ಮೇಲೆ ಸಾಮಾಜಿಕ ಮೇಲಾಧಿಪತ್ಯ ನಡೆಸಿದ್ದ ಮನುವಾದಿ ಶಕ್ತಿಗಳಿಗೆ ಮತ್ತು ಬ್ರಿಟೀಷರ ಅಕ್ರಮ ಸಂತಾನಗಳಾಗಿ ಹುಟ್ಟಿ ಬಂಡವಾಳದ ಬೂಟು ತೊಟ್ಟು ದೈತ್ಯಾಕಾರವಾಗಿ ಬೆಳೆದಿರುವ ಕಾರ್ಪೋರೇಟ್ ಬಾಸುಗಳಿಗೆ ನಮ್ಮ ಈ ಅರೆಬರೆ ಉನ್ನತಿ ಮತ್ತು ನಾವು ಅನುಭವಿಸುತ್ತಿದ್ದ ಈ ಅರೆಬರೆ ಸ್ವಾತಂತ್ರವೂ ಸಹ್ಯವಾಗಲಿಲ್ಲ. ನಮ್ಮನ್ನು ಮತ್ತೆ ದಾಸರನ್ನಾಗಿಸಲು ಮತ್ತು ಉಚಿತ ಬಿಟ್ಟಿ ಕೂಲಿಗಳನ್ನಾಗಿಸಲು ಎಡಬಿಡದೆ ಷಡ್ಯಂತ್ರಗಳನ್ನು ಹೆಣೆಯತೊಡಗಿದರು. ಫ್ಯಾಸೀವಾದವೆಂದರೆ ಆಳುವವರು ನಡೆಸುವ ಸರ್ವಾಧಿಕಾರ ಮಾತ್ರವಲ್ಲ. ಜನಸಾಮಾನ್ಯರನ್ನು ಮೋಡಿಗೊಳಿಸಿ ಅವರ ಸಮ್ಮತಿಯೊಂದಿಗೆ ಜಾರಿಗೆ ತರುವ ನಿರಂಕುಶಧಿಕಾರ, ಒಂದು ಜನ ಸಮುದಾಯ ಮತ್ತೊಂದು ಜನ ಸಮುದಾಯವನ್ನು ದ್ವೇಷಿಸುವಂತೆ ಮಾಡುವ, ಶೋಷಕರೇ ತಮ್ಮ ಉದ್ಧಾರಕರು ಎಂದು ಭಾವಿಸುವಂತೆ ಮಾಡುವ, ವಿವೇಚನಾ ಶಕ್ತಿಯನ್ನೆ ನಾಶಗೊಳಿಸಿ ಜನರನ್ನು ಅಂಧ ರಾಜಕೀಯ ಭಕ್ತರನ್ನಾಗಿಸುವ ಸಾಮಾಜಿಕ ಕುತಂತ್ರ, ಅಧಾರ್ಮಿಕ ಬಲ, ಸಾಮಾಜಿಕ ಬಲ, ಹಣದ ಬಲ ಮತ್ತು ಮಾಧ್ಯಮದ ಬಲ ಬಳಸಿಕೊಂಡು ಈ ಕುತಂತ್ರವನ್ನು ಕಾರ್ಯರೂಪಕ್ಕೆ ಇಳಿಸಿದರು. ನಮ್ಮ ಜನರ ಮುಗ್ನ ಭಾವನೆಗಳನ್ನು ಬಳಸಿಕೊಂಡರು, ನಮ್ಮವರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡರು. ದೇವರ ಹೆಸರಲ್ಲಿ ಧರ್ಮದ ಹೆಸರಲ್ಲಿ ರಾಷ್ಟ್ರದ ಹೆಸರಲ್ಲಿ ನಮಗೆ ದ್ವೇಷದ ವಿಷವನ್ನು ಕುಡಿಸಿದರು. ನೆರೆಯವರನ್ನೇ ಅನುಮಾನಿಸುವಂತೆ ಮಾಡಿದರು, ಮನೆಮುರಿಯಲು ಬಂದವರನ್ನು ಆಪತ್ಕಾಂದವರೆಂದು ಕಾಣುವಂತೆ ಮಾಡಿದರು. ಪಾರಂಪರಿಕ ನಾಲಿಗೆ ಮತ್ತು ಆಧುನಿಕ ಮಾಧ್ಯಮ ಎರಡನ್ನೂ ಇದಕ್ಕಾಗಿ ಬಳಸಿಕೊಂಡರು. ನಾವು ಬಡಿದಾಡಿಕೊಳ್ಳಲು ಶುರುಮಾಡಿದೆವು. ಅವರು ಬಾಚಿಕೊಳ್ಳಲು ಪ್ರಾರಂಭಿಸಿದರು. ನೋಡನೋಡುತ್ತಿದ್ದಂತೆ ಧಾರ್ಮಿಕ ಕೇಂದ್ರಗಳು, ಶಾಲಾ ಕಾಲೇಜುಗಳು, ಓಣಿಗಳು, ಒಂದೊಂದೇ ಸಮುದಾಯಗಳು, ರಾಜಕೀಯ ಅಧಿಕಾರ, ಮಾಧ್ಯಮ, ಮಿಲಿಟರಿ ಕೊನೆಗೆ ನ್ಯಾಯಾಲಯ ಎಲ್ಲವೂ ಅವರ ಕಪಿಮುಷ್ಟಿಗೆ ಒಳಗಾಗಿಬಿಟ್ಟವು. ಉಳ್ಳವರ “ಪ್ರಜಾತಂತ್ರದ ಜಾಗದಲ್ಲಿ ದುಷ್ಟರ ಸರ್ವಾಧಿಕಾರ” ಸಂಸ್ಥಾಪಿಸಲ್ಪಟ್ಟಿತು. ನಮ್ಮ ಸಂತರು, ಹಿರಿಯರು, ಹುತಾತ್ಮರು ಕಟ್ಟಿದ ದೇಶ ಜಾತಿವಾದಿಗಳ, ಧರ್ಮಾಂಧರ, ದುರಭಿಮಾನಗಳ ಹಾಗೂ ಕ್ರಿಮಿನಲ್ ಜಾತಿವಾದಿಗಳ ಪಾಲಾಗಿಬಿಟ್ಟಿತು. ಸರ್ವಾಧಿಕಾರಿಗಳು ನಮ್ಮ ಸರ್ವವನ್ನೂ ಕಬಳಿಸಲು ಹೊರಟಿದ್ದಾರೆ ನಮ್ಮನ್ನು ದನಿ ಇಲ್ಲದ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಈಗ ನೇರ ಪ್ರಶ್ನೆ ನಮ್ಮ ಮುಂದೆ, ದುಷ್ಟರಿಗೆ ಶರಣಾಗಿ ನಮ್ಮ ಮಹಾತ್ಮರ ಕನಸು ಮಣ್ಣುಗೂಡಲು ಬಿಡೋಣವೆ ? ಅಥವಾ ಅವರ ಚಿತೆಯ ಚೈತನ್ಯಗಳಾಗಿ ಮೇಲೆದ್ದು ನಮ್ಮ ಪಾಲನ್ನು ಪಡೆದು ಈ ನೆಲದ ಮಕ್ಕಳಿಗಾಗಿ ಮರು ದಕ್ಕಿಸಿಕೊಳ್ಳೋಣವೆ ?

ದಲಿತ ವಿದ್ಯಾರ್ಥಿ ಪರಿಷತ್ತಿನ ಉದ್ದೇಶಗಳೇನು ?

ಸಮಾಜದಲ್ಲಿ ಬೇರುಬಿಟ್ಟಿರುವ ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಜಾತಿ, ಧರ್ಮ, ಲಿಂಗ ಮತ್ತು ಪ್ರಾಂತೀಯ ಅಸಮಾನತೆಗಳ ವಿರುದ್ಧ ಹಾಗೂ ಶೋಷಿತ ವರ್ಗಗಳ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಲಿತ ವಿದ್ಯಾರ್ಥಿ ಪರಿಷತ್ತು ಸಂಘರ್ಷ ನಡೆಸುತ್ತದೆ. ಎಲ್ಲ ರೀತಿಯ ಅಸಮಾನತೆಗಳು ಅಂತ್ಯಗೊಳ್ಳಬೇಕು. ನೆಮ್ಮದಿಯ ಸುಸ್ಥಿರ ಬದುಕು ಈ ಶೊಷಿತ, ಧಮನಿತ ಸಮುದಾಯಗಳಿಗೂ ಸಿಗಬೇಕು, ಸಂವಿಧಾನ ಆಶಯದಂತೆ ಎಲ್ಲ ಹಕ್ಕು ಅಧಿಕಾರ ದಲಿತ ಧಮನಿತರಿಗೂ ದೊರೆಯಬೇಕು.

The Dalit Vidyarthi Parishad (DVP) is an organization that works under the principles of Baba Saheb Ambedkar and advocates the rights of exploited students under the Constitution. Baba Saheb is working to educate the students on the development of the exploited classes and to inform the students of Baba Saheb Dr BR Ambedkar.

“We must stand on our own feet and fight as best as we can for our rights. So carry on your agitation and organise your forces. Power and prestige will come to you through struggle.”

Dr B R Ambedkar

ಸಮಸಮಾಜದ ಸ್ಥಾಪನೆ ದಲಿತ ವಿದ್ಯಾರ್ಥಿ ಪರಿಷತ್ತಿನ ಅಂತಿಮ ಗುರಿಯಾಗಿದೆ

ಸಮಸಮಾಜದ ಸ್ಥಾಪನೆ ಅಷ್ಟು ಸುಲಭವಲ್ಲ ಅದೊಂದು ಸುದೀರ್ಘ ಸಂಘರ್ಷದ ಪಯಣ ಎಂಬ ಅರಿವು ವಿದ್ಯಾರ್ಥಿ ಪರಿಷತ್ತಿಗೆ ಇದೆ. ಅದಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ನಾವು ಮಾಡಬೇಕಿದೆ ಹಾಗೂ ಸಾಧಿಸಬೇಕಿದೆ. ನಮಗೆ ಅಂಬೇಡ್ಕರ್ ಮಾರ್ಗವೇ ಅಂತಿಮ.

ಗುರಿ ಸಾಧನೆಯ ಮಾರ್ಗ ಏನೂ ?

ಮೇಲ್ಕಂಡ ಜನಸಿದ್ಧಾಂತಗಳು ಸತ್ಯ ಮತ್ತು ಸಮಾನತೆಯಲ್ಲಿ, ಪ್ರೀತಿ ಮತ್ತು ಪ್ರಾಮಾಣಿಕತೆಯಲ್ಲಿ ಅಚಲ ವಿಶ್ವಾಸವಿಡುವುದನ್ನು ನಮಗೆ ಈ ನೆಲದ ಕ್ರಾಂತಿಗಳು ಕಲಿಸಿವೆ. ಬದಲಾವಣೆ ಜಗದ ನಿಯಮ ಎಂಬುದನ್ನು ಮನವರಿಕೆ ಮಾಡಿಸಿವೆ, ಜನರೇ ಇತಿಹಾಸದ ನಿರ್ಮಾಪಕರು ಎಂಬುದನ್ನೂ ಹೇಳಿಕೊಟ್ಟಿವೆ. ಈ ದೇಶ ಇಂದು ದುಷ್ಟಕೂಟದ ಷಡ್ಯಂತ್ರಕ್ಕೆ ಬಲಿಯಾಗಿದ್ದರೂ ಅದರಿಂದ ಹೊರಬರುವ ಅದಮ್ಯ ಚೈತನ್ಯ ಈ ನೆಲದೊಳಗೆ ಅಂತರ್ಗತವಾಗಿದೆ. ಮೋಡಿಗೊಳಗಾಗಿರುವ ನಮ್ಮ ಜನಕ್ಕೆ ತಮಗಾದ ಮಹಾದ್ರೋಹದ ಅರಿವಾದಾಗ ಜಾಗೃತಿಯ ಹೊಸ ಉಬ್ಬರ ಈ ಶೊಷಿತ ಸಮಾಜಗಳ ಧ್ವನಿಯನ್ನು ಹೊಸ ಎತ್ತರಕ್ಕೆ ಒಯ್ಯಲಿದೆ. ಶೋಷಕರ ಬಲ ಶೋಷಿತರ ಅನೈಕ್ಯತೆಯಲ್ಲಿದೆ. ಜಾಗೃತ ಶೊಷಿತ ವಿದ್ಯಾರ್ಥಿ ಯುವಜನರ ಐಕ್ಯತೆ ಗುರಿ ಸಾಧನೆಯ ಮೂಲಸೂತ್ರವಾಗಿದೆ. ಇದನ್ನು ಸಾಧಿಸಲು ನಾವು ಕೆಳಕಂಡ ಗಟ್ಟಿ ಹೆಜ್ಜೆಗಳನ್ನು ಹಾಕಬೇಕಿದೆ.

ದಲಿತ ವಿದ್ಯಾರ್ಥಿ ಪರಿಷತ್ತು ನಂಬಿಹ ಸಿದ್ಧಾಂತವೇನು ?

ದಲಿತ ವಿದ್ಯಾರ್ಥಿ ಪರಿಷತ್ತು ಅಂಬೇಡ್ಕರವಾದ ಅಂತಿಮ ಮಾರ್ಗ ಎಂದು ಬಲವಾಗಿ ನಂಬಿದೆ. ಜಗತ್ತಿನ ಎಲ್ಲ ವಿದ್ಯಾರ್ಥಿ ಯುವಜನರ ಹಾಗೂ ಈ ನೆಲದಲ್ಲಿ ನಡೆದ ಎಲ್ಲಾ ಸಾಮಾಜಿಕ ಕ್ರಾಂತಿಗಳು DVP ಗೆ ಪ್ರೇರಣೆಗಳಾಗಿವೆ ಮತ್ತು ಸೈದ್ಧಾಂತಿಕ ಸಂಪನ್ಮೂಲಗಳಾಗಿವೆ. ಬ್ರಾಹ್ಮಣ್ಯ ಮತ್ತು ಬಂಡವಾಳವಾದ ಒಟ್ಟುಗೂಡಿ ದೇಶವನ್ನು ಆಪೋಷಣೆ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಬ್ರಾಹ್ಮಣ್ಯದ ಒಳಹೋರಣವನ್ನು ಬಿಚ್ಚಿಟ್ಟು ಅಂಬೇಡ್ಕರವಾದ ನಮ್ಮ ಓದಿಗೆ ವಿಶೇಷ ಒತ್ತು ನೀಡುತ್ತದೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ನಮ್ಮ ಪೂರ್ವಿಕರ ಸೈದ್ಧಾಂತಿಕ ನಿಲುವುಗಳನ್ನೂ ಮರುಹೊಂದಿಸಿಕೊಳ್ಳುತ್ತಾ ಗುರಿ ಸಾಧನೆಯತ್ತ ಸಾಗಬಯಸುತ್ತದೆ.

ಶೋಷಿತ ವಿದ್ಯಾರ್ಥಿಗಳ ಆಂದೋಲನಕ್ಕೆ ಮುಂದಾಗೋಣ

ವೈಚಾರಿಕ ಪ್ರಬುದ್ಧತೆಯ ವಿದ್ಯಾರ್ಥಿ ಯುವ ಜನತೆಯನ್ನು ಸಂಘಟಿಸುವ ಸ್ಥಳ ವಿಶ್ವಾವಿದ್ಯಾನಿಲಯಗಳಾಗಿವೆ.ವಿದ್ಯಾರ್ಥಿ ಯುವಜನರನ್ನು ಜಾಗೃತಗೊಳಿಸುವ, ಹಕ್ಕಿನ ಅರಿವು ಮೂಡಿಸುವ ಅವರಲ್ಲಿನ ಶಕ್ತಿಯನ್ನು ಅನಾವರಣಗೊಳಿಸುವ ಸಾಧನಗಳಾಗಿವೆ. ವಿವಿಧ ಶೋಷಿತ ವರ್ಗಗಳ, ದಮನಿತ ಸಮುದಾಯಗಳ ವಿದ್ಯಾರ್ಥಿ ಯುವಜನರನ್ನು ಅವರವರ ನ್ಯಾಯಬದ್ಧ ಹಕ್ಕುಗಳಿಗಾಗಿ ಒಗ್ಗೂಡಿಸಿ ವಿದ್ಯಾರ್ಥಿ ಯುವ ಆಂದೋಲನಗಳನ್ನು ಬಲಪಡಿಸೋಣ, ದಮನದ ವಿರುದ್ಧ ಸಿಡಿಯುವ ವಿದ್ಯಾರ್ಥಿ ಯುವಜನ ಹೋರಾಟಗಳನ್ನು ಕಟ್ಟೋಣ, ಪ್ರತ್ಯೇಕ – ಪ್ರತ್ಯೇಕ ಹೋರಾಟಗಳಿಂದಲೇ ಗುರಿಸಾಧನೆ ಸಾಧ್ಯವಿಲ್ಲ ಎಂಬ ಅರಿವನ್ನು ವಿದ್ಯಾರ್ಥಿ ಯುವಜನ ಚಳವಳಿಗಳ ಒಳಗೆ ಬೆಳೆಸೋಣ ನವ ಸಮಾಜ ಕಟ್ಟುವ ನಿನಾದದೊಂದಿಗೆ ಮುನ್ನುಗ್ಗುವ ಸದೃಢ ವಿದ್ಯಾರ್ಥಿ ಪ್ರವಾಹವನ್ನಾಗಿ ಪರಿವರ್ತಿಸೋಣ.

ಬನ್ನಿ…DVP ಜೊತೆಗೂಡಿ ಬಡ ಶೋಷಿತ ವರ್ಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸೋಣ.

Back to Top